ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮನೆ ಮನೆ ಪ್ರಚಾರದ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ಸಿನ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿರುವ ದೂರು ಬಂದಿದೆ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಲು ಮುಂದಾಗಿದೆ. ಚುನಾವಣಾ ಪ್ರಚಾರದ ವೇಳೆ ಜನಪ್ರತಿನಿಧಿ ಕಾಯ್ದೆಯ 126ನೇ ನಿಯಮವನ್ನು ರಾಹುಲ್ ಗಾಂಧಿ ಅವರು ಉಲ್ಲಂಘಿಸಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾಧಿಕಾರಿ ಆಧಿಕಾರಿ ಬಿಬಿ ಸ್ವಾನ್ ಅವರು, ರಾಹುಲ್ ಗಾಂಧಿ ಅವರ ಸಂದರ್ಶನ ಸ್ಥಳೀಯ ವಾಹಿನಿಯೊಂದರಲ್ಲಿ ಪ್ರಸಾರವಾದ ಬಗ್ಗೆ ದೂರು ಬಂದಿದ್ದು, ಡಿವಿಡಿಗಳನ್ನು ಪಡೆದುಕೊಂಡು ಪರಿಶೀಲಿಸಲಾಗುತ್ತಿದೆ. ಜನಪ್ರತಿನಿಧಿ ಕಾಯ್ದೆ 126ರ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಖಚಿತವಾದ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.