ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಪಟೇಲ್ ನಗರದ ಸಮೀಪದ ಕಾಳಿ ನದಿಯಲ್ಲಿ ಮೊಸಳೆಯೊಂದು ಜಿಂಕೆಯನ್ನು ಬೇಟೆಯಾಡಿದೆ. ಸ್ಥಳೀಯರ ಮೊಬೈಲ್‌ನಲ್ಲಿ ದೃಶ್ಯ ಸೆರೆಯಾಗಿದೆ.
ಜಿಂಕೆ ಒಂದು ದಡದಿಂದ ಇನ್ನೊಂದು ದಡಕ್ಕೆ ಬರಲು ಪ್ರಯತ್ನಿಸುತ್ತಿತ್ತು. ಇದನ್ನು ಕಂಡ ಮೊಸಳೆ ಜಿಂಕೆಯನ್ನು ಬೆನ್ನಟ್ಟಿ ಹಿಡಿದಿದೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಾಂಡೇಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಿಯುವ ಕಾಳಿ ನದಿಯಲ್ಲಿ ಮೊಸಳೆಗಳಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ನದಿ ಸಮೀಪ ವಾಸಿಸುವ ಜನರು ಮತ್ತು ಸಾಕು ಪ್ರಾಣಿಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
ಸ್ನಾನಕ್ಕೆಂದು ನದಿಗೆ ಇಳಿದ ಬಾಲಕ ಮೇಲೆ ಮೊಸಳೆ ಏಕಾಏಕಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದ ಘಟನೆ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಸಣಾಪುರ ಗ್ರಾಮದಲ್ಲಿ ನಡೆದಿತ್ತು. 16 ವರ್ಷದ ವೇದಮೂರ್ತಿ ಎಂಬಾತನ ಮೇಲೆ ಮೊಸಳೆ ದಾಳಿ ಮಾಡಿತ್ತು. ದಾಳಿಯ ದೃಶ್ಯ ಕಂಡ ವೀರೇಶ್ ಎಂಬಾತ ಪಕ್ಕದಲ್ಲಿ ಸಿಕ್ಕ ಕಲ್ಲು ತೆಗೆದುಕೊಂಡು ಮೊಸಳೆಯ ಮೇಲೆ ಬಿಸಾಕಿ ಬಾಲಕನನ್ನು ರಕ್ಷಿಸಿದ್ದನು.
ಇದನ್ನೂ ಓದಿ: ಬಳ್ಳಾರಿ: ಸ್ನಾನಕ್ಕೆಂದು ನದಿಗಿಳಿದ ಬಾಲಕನ ಮೇಲೆ ಮೊಸಳೆ ದಾಳಿ - CROCODILE ATTACK