Surprise Me!

ದಸರಾ ಆನೆ ಭೀಮನಿಗೆ ಮಜ್ಜನ: ವಿಡಿಯೋ

2025-08-13 50 Dailymotion

ಮೈಸೂರು: ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಭೀಮ ಆನೆಯನ್ನು ಇಂದಿನ ತಾಲೀಮಿನ ಬಳಿಕ ಸ್ನಾನದ ತೊಟ್ಟಿಗೆ ಕರೆದೊಯ್ದ ಮಾವುತರು ಹಾಗೂ ಕಾವಾಡಿಗಳು ಸ್ನಾನ ಮಾಡಿಸಿದರು.

ನಾಡಹಬ್ಬ ದಸರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಮೊದಲ 9 ಆನೆಗಳ ತಂಡ ಅರಮನೆ ಪ್ರವೇಶಿಸಿದ್ದು, ಗಜಪಡೆಯ ತೂಕದ ನಂತರ ತಾಲೀಮು ಆರಂಭಿಸಲಾಗಿದೆ. 

25 ವರ್ಷದ ಭೀಮ 5,465 ಕೆ.ಜಿ ತೂಕ ಹೊಂದಿದ್ದಾನೆ. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿರುವ ಮೊದಲ ಹಂತದ ಗಜಪಡೆಯಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಹಾಗೂ ಬಲಾಢ್ಯ ಆನೆ ಅನ್ನೋದು ಗಮನಾರ್ಹ.

ಬೆಳಗ್ಗೆ ತಾಲೀಮು ಮುಗಿಸಿ ವಿಶೇಷ ಆಹಾರ ನೀಡಿದ ಬಳಿಕ ಮಾವುತರಾದ ಗುಂಡ ಹಾಗೂ ಕಾವಾಡಿ ನಂಜುಂಡಸ್ವಾಮಿ ತಮ್ಮ ಸಹಾಯಕರೊಂದಿಗೆ ನೀರಿನ ಕೊಳದ ಬಳಿ ಭೀಮನಿಗೆ ಮಜ್ಜನ ಮಾಡಿಸಿದರು.

ಭೀಮನ ಕುರಿತು: ಮತ್ತಿಗೋಡು ಆನೆ ಶಿಬಿರ ಭೀಮನ ಮೂಲ ಆವಾಸ ಸ್ಥಳ. 2000ರಲ್ಲಿ ಭೀಮನಕಟ್ಟೆ ಅರಣ್ಯ ಪ್ರದೇಶದಲ್ಲಿ ತಾಯಿಯನ್ನು ಕಳೆದುಕೊಂಡು ಅರಣ್ಯದಲ್ಲಿದ್ದ ಈ ಆನೆ ಮರಿಯನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡು ಬಂದು ಸಾಕಿದ್ದರು. ಭೀಮ ಎಂದು ಹೆಸರಿಟ್ಟಿದ್ದರು. ಚಿಕ್ಕಂದಿನಿಂದಲೇ ಆನೆ ಅರಣ್ಯ ಇಲಾಖೆಯ ಸಿಬ್ಬಂದಿಯ ಜೊತೆ ಬೆಳೆದಿದೆ. ಹಾಗಾಗಿ ಭೀಮನನ್ನು ಕಂಡರೆ ಸಿಬ್ಬಂದಿಗೆ ಎಲ್ಲಿಲ್ಲದ ಪ್ರೀತಿ. ಭೀಮನ ಶಿಸ್ತು ಎಲ್ಲರಿಗೂ ಅಚ್ಚುಮೆಚ್ಚು. ಕಾಡಾನೆ ಕಾರ್ಯಾಚರಣೆಯಲ್ಲಿ ತೋರುವ ಧೈರ್ಯವನ್ನು ಅರ್ಜುನ ಆನೆಗೆ ಹೋಲಿಸುವುದುಂಟು. ಆದ್ದರಿಂದಲೇ ಭೀಮ ಭವಿಷ್ಯದ ಅರ್ಜುನ ಆನೆಗೆ ಪರ್ಯಾಯ ಎಂದು ಭಾವಿಸಲಾಗುತ್ತಿದೆ. 

ಮೊದಲ ಬಾರಿಗೆ 2017ರಲ್ಲಿ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಲಾನೆಯಾಗಿ ಭಾಗವಹಿಸಿದ್ದ ಭೀಮನನ್ನು 2022ರಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಗಮನಿಸಿದ್ದರು. ಬಳಿಕ ಅವರು ಈ ಆನೆಯನ್ನು ಅರಮನೆಯ ಪೂಜೆಗೆ ಪಟ್ಟದಾನೆಯಾಗಿ ಆಯ್ಕೆ ಮಾಡಿದ್ದರು.  

ಇದನ್ನೂ ಓದಿ: ವಿಶ್ವ ಆನೆಗಳ ದಿನಾಚರಣೆ: ಸಕ್ರೆಬೈಲು ಆನೆ ಬಿಡಾರದ ಮರಿಗಳಿಗೆ ತುಂಗಾ, ಚಾಮುಂಡಿ ಹೆಸರು ನಾಮಕರಣ - NAMING CEREMONY