ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿ, ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಆನೆ ಶೆಡ್ನಲ್ಲಿ ವಾಸ್ತವ್ಯ ಹೂಡಿರುವ ಆನೆಗಳು ಬೆಳಗ್ಗೆ ಮತ್ತು ಸಂಜೆ ತಾಲೀಮಿನ ಜೊತೆಗೆ ವಿಶೇಷ ಆಹಾರ ತಿನ್ನುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಸಜ್ಜಾಗುತ್ತಿವೆ. ಈ ಮಧ್ಯೆ ಆನೆ ಶೆಡ್ ನಲ್ಲಿರುವ ಮಹೇಂದ್ರ ಹಾಗೂ ಲಕ್ಷ್ಮಿ ಮೇವು ತಿನ್ನುತ್ತಾ ಚಿನ್ನಾಟ ಆಡುತ್ತಿರುವ ವಿಡಿಯೋ ಈಟಿವಿ ಭಾರತ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆ. 4ರಂದು ಅರಣ್ಯಭವನದಿಂದ ಅರಮನೆಗೆ ಬಂದ ಎಲ್ಲ ಆನೆಗಳು ತಾಲೀಮು, ವಿಶ್ರಾಂತಿ ಜತೆಗೆ ಮಹಾಮಜ್ಜನದ ತಂಪಿನಲ್ಲಿ ಹಾಯಾಗಿವೆ. ನೋಡುಗರ ಕಣ್ಮನ ಸೆಳೆಯುತ್ತಿವೆ. ನೋಡುಗರ ಕುತೂಹಲ, ಖುಷಿ ಅರಳುವಂತೆ ಮಹೇಂದ್ರ- ಲಕ್ಷ್ಮಿ ಇಬ್ಬರೂ ಮೋಜಿನಲ್ಲಿವೆ.
ಈ ಎರಡು ಆನೆಗಳು ಬಳ್ಳೆ ಶಿಬಿರದಿಂದ ಬಂದಿದ್ದು, ಮಹೇಂದ್ರ ಕಳೆದ ಬಾರಿ ಸಾಲಾನೆಯಾಗಿ ಬಂದಿದ್ದ ಹಾಗೆಯೇ ಲಕ್ಷ್ಮಿ ಕುಮ್ಕಿ ಆನೆಯಾಗಿ ನಾಡಹಬ್ಬ ದಸರಾದಲ್ಲಿ ಭಾಗಿಯಾಗಿತ್ತು. ಅದೇ ರೀತಿ ಈ ಬಾರಿಯ ನಾಡಹಬ್ಬದಲ್ಲೂ ತಮ್ಮ ಕಾಯ೯ವನ್ನು ನಿವ೯ಹಿಸಲಿವೆ. ಮಹೇಂದ್ರ ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಅಪಾಯಕಾರಿ ಕಾರ್ಯಾಚರಣೆಯಲ್ಲಿ ವಿಶಿಷ್ಟವಾದ ಧೈಯ೯ ಹೊಂದಿದ್ದಾನೆ. ಲಕ್ಷ್ಮಿ ಆನೆಯನ್ನು ಸರ್ಕಸ್ ಕಂಪನಿಯಿಂದ ಕರೆದುಕೊಂಡು ಬರಲಾಗಿತ್ತು. ನಾಡಹಬ್ಬದ ಉತ್ಸವದಲ್ಲಿ ಈಗ ಎರಡನೇ ಬಾರಿಗೆ ಭಾಗವಹಿಸಲು ಸಿದ್ಧವಾಗಿದೆ.
ಇದನ್ನೂ ಓದಿ : ಜಿಂಕೆ ಹಿಂಡು ಕಂಡು ಓಡಿದ ಚಿರತೆ; ಸಫಾರಿ ಜೀಪ್ ಮುಂದೆಯೇ ಹುಲಿರಾಯನ ಚಿನ್ನಾಟ! Video - BANDIPUR WILD ANIMALS