Surprise Me!

ಮೈಸೂರು ದಸರಾ: ಕ್ಯಾಪ್ಟನ್ ಅಭಿಮನ್ಯು, ಪಟ್ಟದಾನೆ ಭೀಮನಿಗೆ ತಣ್ಣೀರ ಮಜ್ಜನ- ವಿಡಿಯೋ

2025-08-22 58 Dailymotion

ಮೈಸೂರು: ನಾಡಹಬ್ಬ ದಸರಾಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸಿದ್ಧತೆಗಳು ಭರದಿಂದ ಸಾಗಿವೆ. ಕಾಡಿನಿಂದ ನಾಡಿಗೆ ಬಂದ ಗಜಪಡೆ ತಾಲೀಮು, ಮಜ್ಜನ, ವಿಶೇಷ ಆಹಾರ ಮುಂತಾದ ವಿಶಿಷ್ಟ ದಿನಚರಿಗಳಲ್ಲಿ ನಾಡಹಬ್ಬಕ್ಕೆ ತಯಾರಾಗುತ್ತಿವೆ. ಹೀಗೆ ತಾಲೀಮು ಮುಗಿಸಿ ಬಂದ ಅಭಿಮನ್ಯು ಹಾಗೂ ಭೀಮ ಆನೆಗಳಿಗೆ ಮಧ್ಯಾಹ್ನದ ಉರಿಬಿಸಿನಲ್ಲಿ ತಂಪು ತಂಪು ಸ್ನಾನ ಮಾಡಿಸಲಾಯಿತು.

ಅಭಿಮನ್ಯುವಿನ ಪರಾಕ್ರಮ: ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಅಭಿಮನ್ಯುವನ್ನು 1970ರಲ್ಲಿ ಕೊಡಗು ಹೆಬ್ಬಾಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಇದು ಕೇವಲ ಪಳಗಿದ ಆನೆ ಮಾತ್ರವಲ್ಲ, ಇತರ ಕಾಡಾನೆಗಳನ್ನು ಹಾಗೂ ಹುಲಿಗಳನ್ನು ಸೆರೆಹಿಡಿಯುವ, ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಶಕ್ತಿಶಾಲಿ ಸಾಮರ್ಥ್ಯ ಹೊಂದಿದೆ. ಇದುವರೆಗೆ 140-150 ಕಾಡಾನೆಗಳು ಮತ್ತು 40-50 ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ 59 ವರ್ಷದ ಅಭಿಮನ್ಯು ಆನೆಗೆ ಈ ಬಾರಿ ಜಂಬೂ ಸವಾರಿ ಹೊರುವುದು ಕೊನೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಅಭಿಮನ್ಯು ಅನೆಯನ್ನು ಆಪರೇಷನ್ ಕಿಂಗ್ ಎಂದೂ ಸಹ ಕರೆಯುತ್ತಾರೆ.

6ನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು: 2012ರಿಂದ ಮೈಸೂರು ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದು, 2015ರವರೆಗೆ ಕರ್ನಾಟಕ ವಾದ್ಯಗೋಷ್ಠಿಯ ಗಾಡಿಯನ್ನು ಎಳೆಯುವ ಪ್ರಮುಖ ಜವಾಬ್ದಾರಿಯನ್ನು ನಿಭಾಯಿಸಿದೆ. ಇತ್ತೀಚಿನ ಐದು ವರ್ಷಗಳಿಂದ, ಈ ಆನೆಗೆ ದಸರಾ ಜಾತ್ರೆಯ ಪ್ರಮುಖ ಘಟ್ಟವಾದ ಚಿನ್ನದ ಅಂಬಾರಿ ಹೊರುವ ಗೌರವದ ಜವಾಬ್ದಾರಿ ನೀಡಲಾಗಿದೆ. ತನ್ನ ಶಿಸ್ತು, ಶಕ್ತಿಯುತ ದೇಹಪಟು ಮತ್ತು ಅನುಭವದ ಆಧಾರದಲ್ಲಿ ದಸರಾ ಮಹೋತ್ಸವದ ಅಂಬಾರಿ ಆನೆ ಎಂಬ ಅಲಂಕಾರಿಕ ಸ್ಥಾನ ಗಳಿಸಿದೆ.

ವಿಧೇಯನಂತೆ ಮೈ-ಕೈ ಉಜ್ಜಿಸಿಕೊಂಡ ಭೀಮ: ತಾಲೀಮಿನಿಂದ ಬಳಲಿ ಬಂದ ಭೀಮ ವಿಧೇಯನಂತೆ ಮೈ-ಕೈ ಉಜ್ಜಿಸಿಕೊಂಡು ಸ್ನಾನ ಮಾಡಿ ಫ್ರೆಶ್​ ಆಯಿತು. ಅರಮನೆಯಿಂದ ಆರ್​ಎಂಸಿ ವೃತ್ತದವರೆಗೆ ಹೋಗಿ ವಾಪಸ್ ಬಂದ ಭೀಮ‌ ಆನೆಗೆ ಮಾವುತ ಗುಂಡ, ಕಾವಾಡಿ ನಂಜುಂಡಸ್ವಾಮಿ ಸ್ನಾನ ಮಾಡಿಸಿದರು. ಅವರು ಕೇಳಿದಂತೆ ಕೇಳುತ್ತಾ ಭೀಮ ಆರಾಮವಾಗಿ ಸ್ನಾನ ಮಾಡಿಸಿಕೊಂಡ. 

ಮತ್ತಿಗೋಡು ಆನೆ ಶಿಬಿರದಿಂದ ಬಂದ ಭೀಮನಿಗೆ 25 ವರ್ಷ. 2017ರಿಂದಲೂ ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ, 2022ರಲ್ಲಿ ಪಟ್ಟದಾನೆ ಹಾಗೂ ಸಾಲಾನೆಯಾಗಿ ಭಾಗಿಯಾಗುತ್ತಿದ್ದಾನೆ. 2.85 ಮೀಟರ್ ಎತ್ತರ, 3.05 ಮೀಟರ್ ಉದ್ದ ಇದ್ದಾನೆ. ಭೀಮನಿಗೆ ದಿನೇ ದಿನೇ ಅಭಿಮಾ‌‌ನಿಗಳು ಕೂಡ ಜಾಸ್ತಿ ಆಗುತ್ತಿದ್ದಾರೆ.

ಇದನ್ನೂ ನೋಡಿ: ಮೈಸೂರು: ಕೇರಳದಲ್ಲಿ ತಾಯಿಯಿಂದ ಬೇರ್ಪಟ್ಟ ಮರಿ ಆನೆಗೆ ಬಳ್ಳೆ ಶಿಬಿರದಲ್ಲಿ ರಕ್ಷಣೆ