ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಎರಡು ದಿನದಿಂದ ಮಳೆ ತಗ್ಗಿದೆ. ಆದರೆ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳವಾದ್ದರಿಂದ ಯಡೂರ ವೀರಭದ್ರ ದೇವಸ್ಥಾನದ ವೀರಭದ್ರೇಶ್ವರ ಶಿವಲಿಂಗ ಜಲಾವೃತಗೊಂಡಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ವೀರಭದ್ರ ದೇವಸ್ಥಾನಕ್ಕೆ ಶುಕ್ರವಾರ ರಾತ್ರಿ ದೇವಸ್ಥಾನವನ್ನು ನದಿ ನೀರು ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ ಮೂಲ ವಿಗ್ರಹ ಜಲಾವೃತಗೊಂಡಿದೆ. ನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೆ ಕೃಷ್ಣ ನದಿಗೆ ಆರತಿ ಬೆಳಗಿ ಮಂತ್ರ ಪಠಿಸಿ ಅರ್ಚಕರು ಪುರೋಹಿತರು ನಮಸ್ಕರಿಸಿದರು.
ನೀರು ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಮೊದಲಿಗೆ ವೀರಭದ್ರನಾಥನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿತ್ತು. ಶನಿವಾರ ದಿನದಂದು ಅಮಾವಾಸ್ಯೆ ಇರುವುದರಿಂದ ನಿನ್ನೆಯೇ ಸಾವಿರಾರು ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಕೃಷ್ಣೆಯಲ್ಲಿ ವೀರಭದ್ರೇಶ್ವರ ಜಲಾವೃತಗೊಂಡ ಹಿನ್ನೆಲೆಯಲ್ಲಿ ಗರ್ಭಗುಡಿ ಬಾಗಿಲನ್ನು ಮುಚ್ಚಿ, ಭಕ್ತರಿಗೆ ದೂರಿನಿಂದಲೇ ನಮಸ್ಕರಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೂಲ ಶಿವಲಿಂಗ ಮುಳುಗಡೆಯಾದ ಕಾರಣ ಭಕ್ತರು ದೇವಸ್ಥಾನದ ಶಿಖರಕ್ಕೆ ನಮಸ್ಕರಿಸಿ ಭಕ್ತರು ಹಿಂತಿರುಗುತ್ತಿದ್ದಾರೆ.
ಇದೇ ರೀತಿ ಕಲಬುರಗಿ ಜಿಲ್ಲೆಯ ಮಣ್ಣೂರ ಯಲ್ಲಮ್ಮ ದೇವಸ್ಥಾನ ಮುಳುಗಡೆಯಾಗಿದ್ದು, ಗ್ರಾಮದ ಮತ್ತೊಂದು ಯಲ್ಲಮ್ಮ ದೇವಾಲಯದಲ್ಲಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಕಲಬುರಗಿಯ ಮಣ್ಣೂರ ಯಲ್ಲಮ್ಮ ದೇವಸ್ಥಾನ ಮುಳುಗಡೆ: ಮತ್ತೊಂದು ಯಲ್ಲಮ್ಮ ದೇವಾಲಯದಲ್ಲಿ ಭಕ್ತರಿಗೆ ದರ್ಶನದ ವ್ಯವಸ್ಥೆ