ತುಮಕೂರು: ರಾಜ್ಯದೆಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಮೊದಲ ದಿನವೇ ತುಮಕೂರು ನಗರದಲ್ಲಿ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಭಕ್ತರು ನಿಮಜ್ಜನ ಮಾಡಿ ಭಕ್ತಿಭಾವ ಮೆರೆದರು. ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಬಹುತೇಕ ಕಡೆ ಸಾರ್ವಜನಿಕರಿಗೆ ತಾತ್ಕಾಲಿಕ ಹೊಂಡಗಳನ್ನು ನಿರ್ಮಿಸಿ, ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣಪನಿಗೂ ನಿನ್ನೆ ನಿಮಜ್ಜನ: ನಗರದ ಐದು ಕಡೆ ತಾತ್ಕಾಲಿಕ ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಸುಮಾರು ನಾಲ್ಕು ಅಡಿ ಎತ್ತರದವರೆಗೂ ಇರುವ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲು ವ್ಯವಸ್ಥೆಯಿದೆ. ಬಹುತೇಕ ಮನೆಗಳಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿದ ಗಣಪತಿಯ ಮೂರ್ತಿಗಳನ್ನು ಭಕ್ತರು ನಿನ್ನೆ ನಿಮಜ್ಜನ ಮಾಡಲು ಮುಂದಾಗಿದ್ದು ಗಮನಾರ್ಹವಾಗಿತ್ತು.
ಈ ಸಲ ಕಳೆದ ಬಾರಿಗಿಂತಲೂ ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ಪೂರಕವಾದ ತಾತ್ಕಾಲಿಕ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಭಕ್ತರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಗಣೇಶ ಮೂರ್ತಿಗಳ ವಿಸರ್ಜನೆಗೆ 41 ಕೆರೆಗಳು, 489 ಮೊಬೈಲ್ ನೀರಿನ ಟ್ಯಾಂಕ್‌ಗಳ ವ್ಯವಸ್ಥೆ