ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಸ್ಪಲ್ಪ ದಿನದ ಹಿಂದೆ ಶೃಂಗೇರಿ, ಅಡ್ಡಗದ್ದೆ, ಹೊಸಕೊಪ್ಪ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯಿತಿಯ ಬಿಲಗದ್ದೆಯಲ್ಲಿ ಕಾಣಿಸಿಕೊಂಡಿದೆ. ಕೊಪ್ಪ ತಾಲೂಕಿನ ತುಪ್ಪುರು ಗ್ರಾಮದಲ್ಲಿಯೂ ಇದೇ ರೀತಿಯ ಸಮಸ್ಯೆ ಎದುರಾಗಿದ್ದು, ನೂರಾರು ಅಡಕೆ ಮರಗಳನ್ನು ಉರುಳಿಸಿ ನೆಲಕ್ಕೆ ಬೀಳಿಸಿವೆ.
ಬಾಳೆಹೊನ್ನೂರು, ನರಸಿಂಹರಾಜಪುರ, ಖಾಂಡ್ಯ, ಕೊಪ್ಪ, ಮೂಡಿಗೆರೆ ಭಾಗದ ಜನರು ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಜೀವ ಭಯದಿಂದ ಕೃಷಿ ತೋಟಗಳಿಗೆ ಹೋಗುವ ಪರಿಸ್ಥಿತಿ ಉದ್ಭವಿಸಿದೆ. ಕಾಫಿ ತೋಟದಲ್ಲಿ ಗಜಪಡೆ ಬೀಡು ಬಿಡುತ್ತಿದ್ದು, ಪ್ರಾಣ ಭಯದಿಂದಾಗಿ ಕೆಲಸಗಾರರಾಗಲಿ, ಮಾಲೀಕರಾಗಲಿ ಕಾಫಿ ತೋಟಕ್ಕೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದೆಡೆ ಕಾಡಾನೆಗಳು ಗದ್ದೆಗಳನ್ನು ತುಳಿದು ನಾಶ ಮಾಡುವ ಆತಂಕದಲ್ಲಿದ್ದಾರೆ. ಹಲವು ವರ್ಷದಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ನಾಶ ಮಾಡುತ್ತಿವೆ. ಸದ್ಯ ಅರಣ್ಯ ಇಲಾಖೆ ಹೈ ಅಲರ್ಟ್ ಆಗಿದ್ದು, ಕಾಡಾನೆ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶತಪ್ರಯತ್ನ ಮಾಡುತ್ತಿದ್ದಾರೆ.
ಆನೆ ಉಪಟಳ ಹೆಚ್ಚಾಗುವ ಮುನ್ನ ಶಾಶ್ವತ ಕ್ರಮವಹಿಸಿ : ಹಲವು ಕಾರ್ಮಿಕರು, ರೈತರು ಸಹ ಆನೆ ದಾಳಿಗೆ ಬಲಿಯಾಗಿದ್ದಾರೆ. ಈಗ ಶೃಂಗೇರಿ ಭಾಗದಲ್ಲೂ ಮೂರು ಆನೆಗಳ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
'ಒಂಟಿ ಆನೆಯೊಂದು ಬಿಲಗದ್ದೆ ಸಮೀಪ ಇದ್ದು, ಅದನ್ನು ಆದಷ್ಟು ಬೇಗನೇ ಅಲ್ಲಿಂದ ದಟ್ಟ ಕಾಡಿನ ಭಾಗಕ್ಕೆ ಕಳಿಸುವ ಪ್ರಯತ್ನ ಮಾಡಲಾಗುತ್ತಿದೆ' ಎಂದು ಶೃಂಗೇರಿ ವಲಯ ಅರಣ್ಯ ಅಧಿಕಾರಿ ಮಧುಕರ್ ಹೇಳಿದ್ದಾರೆ.
ಇದನ್ನೂ ಓದಿ : ಬಂಡೀಪುರದಲ್ಲಿ ರಸ್ತೆಗಿಳಿದ ಕಾಡಾನೆ; ಭಯದಲ್ಲಿ ಕಿರುಚಿದ ಪ್ರವಾಸಿಗರು - WILD ELEPHANT