ದಾವಣಗೆರೆ: ಸ್ಕೂಟಿ ಡಿಕ್ಕಿ ಒಳಗೆ ಅಡಗಿ ಕುಳಿತಿದ್ದ ನಾಗರಹಾವನ್ನು ರಕ್ಷಣೆ ಮಾಡಿದ ಘಟನೆ ದಾವಣಗೆರೆ ನಗರದ ಡಿಸಿಎಂ ಟೌನ್ಶಿಪ್ ಅಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸುನೀತಾ ಎಂಬವರ ಸ್ಕೂಟಿಯಲ್ಲಿ 5 ಅಡಿ ಉದ್ದದ ನಾಗರಹಾವು ಅಡಗಿ ಕೂತಿತ್ತು.
ಮನೆ ಬಳಿ ಕಂಡಿದ್ದ ಹಾವು ಹೋಗಿದೆ ಎಂದು ಸುನೀತಾ ಅವರು ಸುಮ್ಮನಾಗಿದ್ದರು. ಆದರೆ ಆ ಹಾವು ಅವರ ದ್ವಿಚಕ್ರ ವಾಹನದಲ್ಲಿ ಅಡಗಿ ಕೂತಿತ್ತು. ಹಾವು ಬುಸುಗುಡುವ ಶಬ್ದ ಕೇಳಿದ ಸುನಿತಾ ಅವರು ಸ್ನೇಕ್ ಬಸವರಾಜ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ತಕ್ಷಣ ಆಗಮಿಸಿದ ಸ್ನೇಕ್ ಬಸವರಾಜ್ ಇಡೀ ಗಾಡಿಯಲ್ಲಿ ಹಾವಿಗಾಗಿ ಹುಡುಕಾಡಿದರೂ ಹಾವು ಸಿಕ್ಕಿರಲಿಲ್ಲ. ಬಳಿಕ ಮೆಕಾನಿಕ್ ಸಹಾಯದಿಂದ ಬೈಕ್ ಡಿಕ್ಕಿಯನ್ನು ಬಿಚ್ಚಿ ನೋಡಿದಾಗ ಹಾವು ಅದರೊಳಗೆ ಬೆಚ್ಚಗೆ ಕುಳಿತಿತ್ತು. ಸ್ನೇಕ್ ಬಸವರಾಜ್ ಅವರು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಸ್ನೇಕ್ ಬಸವರಾಜ್, "ಹಾವು ಇರುವುದಾಗಿ ಕರೆ ಬಂತು. ತಕ್ಷಣ ಸ್ಥಳಕ್ಕೆ ತೆರಳಿ ಎಷ್ಟು ಹುಡುಕಾಡಿದರೂ ಹಾವು ಸಿಕ್ಕಿರಲಿಲ್ಲ. ಬಳಿಕ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ ಬಾಲ ಕಂಡಿತು. ಐದು ಅಡಿಯ ನಾಗರಹಾವು ಸ್ಕೂಟಿಯಲ್ಲಿ ಅಡಗಿ ಕೂತಿತ್ತು. ಮೆಕಾನಿಕ್ ಸಹಾಯದಿಂದ ಡಿಕ್ಕಿ ಬಿಚ್ಚಿಸಿದಾಗ ಹಾವು ಕಂಡಿದೆ. ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದೇನೆ" ಎಂದರು.
ಇದನ್ನೂ ನೋಡಿ: ರಾಯಚೂರು: ಮನೆ ಮುಂದೆ ಕಾಣಿಸಿಕೊಂಡ ಹಾವಿಗೆ ಪೂಜೆ ಮಾಡಿದ ಯುವಕ - Video