Surprise Me!

ಆನೇಕಲ್​ನಲ್ಲಿ ಹೊತ್ತಿ ಉರಿದ ವೇಸ್ಟ್ ಆಯಿಲ್ ಕಂಪನಿ: ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

2025-09-07 2 Dailymotion

ಬೆಂಗಳೂರು (ಆನೇಕಲ್) : ಭಾನುವಾರ (ಸೆ.7) ಬೆಳಗ್ಗೆ ವೇಸ್ಟ್ ರಿಸೈಕಲ್ ಇಂಜಿನ್ ಆಯಿಲ್ ಕಂಪನಿಯೊಂದು ಬೆಂಕಿಯಿಂ ಹೊತ್ತಿ ಉರಿದ ಘಟನೆ ಆನೇಕಲ್ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  

ಸೂರ್ಯನಗರ-ರಾಮಸಾಗರ ಮುಖ್ಯರಸ್ತೆಯ ಹೀಲಲಿಗೆ ಗೇಟ್ ಮುಂದಿನ ವಿಶಾಲ್ ಟರ್ಬೋಟೆಕ್ ಕಂಪನಿ ಇದಾಗಿದೆ. ಕೈ ಒರೆಸುವ ವೇಸ್ಟ್​​ಗೆ ಮೊದಲು ಬೆಂಕಿ ತಗುಲಿ ಅನಂತರ ಇಡೀ ಕಾರ್ಖಾನೆಗೆ ಬೆಂಕಿ ವ್ಯಾಪಿಸಿದೆ. ಬಳಸಿದ ಇಂಜಿನ್ ಆಯಿಲ್ ಅನ್ನು ಮತ್ತೆ ಶುದ್ಧೀಕರಿಸಿ ಮರುಬಳಕೆ ಮಾಡುವ ಕಂಪನಿ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬೆಂಕಿ ಅವಘಡದಿಂದಾಗಿ ಕಂಪನಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಎಲೆಕ್ಟ್ರಾನಿಕ್ ಸಿಟಿ ಹಾಗೂ ಆನೇಕಲ್ ಅಗ್ನಿಶಾಮಕದಳದ ಸಿಬ್ಬಂದಿ ಮೂರು ವಾಹನಗಳಲ್ಲಿ ಸ್ಥಳಕ್ಕೆ ಬಂದಿದ್ದಾರೆ. ನಂತರ ಇಂಜಿನ್ ಆಯಿಲ್ ಕಂಪನಿಯಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಬೆಳಗ್ಗೆ ಸಮಯದಲ್ಲಿ ಅವಘಡ ಸಂಭವಿಸಿದ್ದರಿಂದಾಗಿ ಕಾರ್ಮಿಕರ್ಯಾರು ಕಂಪನಿಯಲ್ಲಿರಲಿಲ್ಲ. ಹೀಗಾಗಿ, ಯಾರಿಗೂ ಅನಾಹುತ ಆಗಲಿಲ್ಲ ಎಂದು ಸೂರ್ಯನಗರ ಪೊಲೀಸರು ದೃಢಪಡಿಸಿದ್ದಾರೆ. 

ಕಂಪನಿ ಶೇಕಡ 75 ರಷ್ಟು ಭಾಗ ಸುಟ್ಟಿದೆ. ಪೊಲೀಸರು, ಸಾರ್ವಜನಿಕರು ಹಾಗೂ ಅಗ್ನಿಶಾಮಕ ದಳದ ಸಹಕಾರದಿಂದ ಕಂಪನಿಯಲ್ಲಿ ವ್ಯಾಪಿಸಿದ್ದ ಬೆಂಕಿ ತಹಬದಿಗೆ ಬಂದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ :  ಬೆಂಗಳೂರು ಅಗ್ನಿ ಅವಘಡದಲ್ಲಿ ಐವರ ಸಾವು ಪ್ರಕರಣ: ಕಟ್ಟಡದ ಇಬ್ಬರು ಮಾಲೀಕರು ಪೊಲೀಸ್ ವಶಕ್ಕೆ